‘ಧರಿತ್ರಿ’ಯಲ್ಲಿ ಮಕ್ಕಳ ಜತೆ ದೇವರೂ ನಗುತ್ತಾನೆ!

‘ಧರಿತ್ರಿ’ಯಲ್ಲಿ ಮಕ್ಕಳ ಜತೆ ದೇವರೂ ನಗುತ್ತಾನೆ!

‘ಧರಿತ್ರಿ’ಯಲ್ಲಿ ಮಕ್ಕಳ ಜತೆ ದೇವರೂ ನಗುತ್ತಾನೆ!

BY ವಿಜಯವಾಣಿ ನ್ಯೂಸ್ · DEC 2, 2015

ಸಾಮಾನ್ಯ ಮಕ್ಕಳನ್ನೇ ಸಾಕಲು ಈಗಿನ ಪಾಲಕರು ಪಿರಿಪಿರಿ ಎನ್ನುತ್ತಿರುವಾಗ ವಿಶೇಷ ಮಕ್ಕಳ ಬಾಳು ಕಟ್ಟುವ ಕೆಲಸ ನಿಜಕ್ಕೂ ಸವಾಲಿನದ್ದು. ಇದಕ್ಕಾಗಿ, ಮಾನವೀಯ ತುಡಿತ, ಶುದ್ಧ ಅಂತಃಕರಣ, ನಿಸ್ವಾರ್ಥ ಸೇವೆ, ಅಪಾರ ತಾಳ್ಮೆ ಬೇಕು. ಇದರಲ್ಲಿ ಒಂದು ಕೊರತೆಯಾದರೂ ಉದ್ದೇಶ ಗುರಿ ಮುಟ್ಟುವುದಿಲ್ಲ. ಹಾಗಾಗಿಯೇ ‘ಧರಿತ್ರಿ’ಯಲ್ಲಿನ ಸೇವೆ ವಿಶೇಷ ಎನಿಸುತ್ತದೆ.

ಅದು ಥೇಟ್ ದೇವರ ನಗುವಿನಂತೆ! ಒಂಚೂರೂ ಕಲ್ಮಶವಿಲ್ಲ. ಆ ಮುಗ್ಧ ಮಕ್ಕಳ ಮೊಗದಲ್ಲಿ ಕಾರಣವಿಲ್ಲದೆ ಖುಷಿಯ ಗೆರೆಗಳು ಹರಡಿಕೊಂಡಾಗ ಬದುಕಲ್ಲಿ ಎಲ್ಲವೂ ಇದ್ದು ಬೇಜಾರನ್ನೇ ಆಮದು-ರಫ್ತು ಮಾಡುವ ಸಾಮಾನ್ಯರಿಗಿಂತ ಈ ಮಕ್ಕಳೇ ಸಾವಿರ ಪಟ್ಟು ವಾಸಿಯೆನಿಸಿತು. ಎಂಥ ನಗು ಅಂತೀರಿ ಅದು… ಮುಖದ ಸ್ನಾಯುಗಳೆಲ್ಲ ಹಿಗ್ಗಿ ಜೋಗದಂತೆ ಖುಷಿ ಹರಡಿಕೊಳ್ಳುತ್ತದೆ. ಆದರೂ ಅದರ ಹಿಂದಿರುವ ನೋವನ್ನು ಹೇಗೆ ಮರೆಯಲು ಸಾಧ್ಯ? ‘ನಮಸ್ತೆ… ಬನ್ನಿ ಸ್ವಾಗತ’ ಎಂದು ತಡವರಿಸುತ್ತಲೇ ಹೇಳಿದಾಗ ನನ್ನ ಎದೆಯಲ್ಲಿ ಯಾಕೋ ಸಾವಿರ ಸಂಕಟಗಳು ಒಮ್ಮೆಲೆ ಸುಳಿದುಹೋದ ಅನುಭವ. ಬಾಲ್ಯ ಎಂಬ ಸುಂದರವಾದ ನಂದನವನದಲ್ಲಿ ಖುಷಿ, ಚೇಷ್ಟೆ ಮಾಡುತ್ತ ಬದುಕಿನ ಸುಂದರ ಘಟ್ಟವನ್ನು ಆಸ್ವಾದಿಸಬೇಕಾದ ಹೊತ್ತಲ್ಲಿ ಇವರು ಮಾತನಾಡಲು, ನಡೆಯಲು, ಓದಲು ಹರಸಾಹಸಪಡುತ್ತಾರೆ. ಕಾರಣ, ಇವರೆಲ್ಲ ಬಹುವಿಧ ನ್ಯೂನತೆ/ಅಂಗವೈಕಲ್ಯ, ಬುದ್ಧಿಮಾಂದ್ಯತೆ ಎದುರಿಸುತ್ತಿರುವ ಮಕ್ಕಳು. ಆದರೆ, ಜೀವನೋತ್ಸಾಹದಲ್ಲಿ, ಹೊಸತರಲ್ಲಿ ತನ್ಮಯವಾಗುವುದರಲ್ಲಿ ಇವರು ಯಾರಿಗಿಂತ ಕಮ್ಮಿ ಇಲ್ಲ!

ಸಂಗೀತದ ಸ್ವರ ಕೇಳುತ್ತಲೇ ನಿಧಾನವಾಗಿ ಬೆರಳುಗಳ ಚಲನೆ ಆರಂಭವಾಗುತ್ತದೆ. ಕಂಠದಿಂದ ಶಬ್ದ ಹೊಮ್ಮಿಸುವ ಪ್ರಯತ್ನ ವಾಗುತ್ತದೆ. ಅದಲ್ಲದೆ, ಫಿಸಿಯೋಥೆರಪಿ, ಪ್ರಾಣಾಯಾಮ, ಯೋಗ, ಧ್ಯಾನ, ಅಕ್ಯುಪ್ರೆಷರ್, ಸ್ಪೀಚ್ ಥೆರಪಿ ಸೇರಿ ವಿವಿಧ ಚಿಕಿತ್ಸಾ ಕ್ರಮಗಳ ಮುಖಾಂತರ ಮಕ್ಕಳ ನ್ಯೂನತೆಯನ್ನು ನಿವಾರಿಸುವ, ಅಷ್ಟು ಮಾತ್ರವಲ್ಲದೆ ಅವರ ವ್ಯಕ್ತಿತ್ವವನ್ನು ಭಾರತೀಯ ಕಲೆ, ಸಂಸ್ಕೃತಿ ಮೂಲಕ ರೂಪಿಸುವ ವಿಶಿಷ್ಟ ಸೇವೆ ಸದ್ದಿಲ್ಲದೆ ನಡೆಯುತ್ತಿದೆ. ಕಳೆದ ಹನ್ನೆರಡು ವರ್ಷಗಳಿಂದ ನಡೆಯುತ್ತಿರುವ ಈ ಸೇವಾಯಜ್ಞದಿಂದ ನೂರಾರು ವಿಶೇಷ ಮಕ್ಕಳು ಹೊಸ ಬಾಳು ಕಂಡುಕೊಂಡಿದ್ದಾರೆ, ಆ ಮಕ್ಕಳ ಹೆತ್ತವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಈ ಎಲ್ಲ ಮನ್ವಂತರಕ್ಕೆ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿರುವ ನರಸೀಪುರ ಗ್ರಾಮದ ಧರಿತ್ರಿ ಟ್ರಸ್ಟ್. ಅಂಗವಿಕಲರ ಹಾಗೂ ಬುದ್ಧಿಮಾಂದ್ಯರ ಶ್ರೇಯೋಭಿವೃದ್ಧಿಗಾಗಿ ಹಲವು ಸಂಘಸಂಸ್ಥೆಗಳು ಕಾರ್ಯನಿರ್ವಹಿಸುತ್ತ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಆದರೆ, ಧರಿತ್ರಿಯ ಕಾರ್ಯ ನಿಜಕ್ಕೂ ವಿಶೇಷ. ಯಾಕೆಂದರೆ, ಇಲ್ಲಿ ಕರುಣೆ ಹೆಚ್ಚು ಕೆಲಸ ಮಾಡುತ್ತದೆ. ಶುದ್ಧ ಅಂತಃಕರಣ, ಮಾನವೀಯತೆ, ಸೇವಾಭಾವ ಪ್ರತಿ ಮನಸಿಗೂ ಬೆಸೆದುಕೊಂಡಿದೆ. ಎಲ್ಲ ಸಿಬ್ಬಂದಿ ಈ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತ ಅವರ ನೋವು-ನಲಿವಲ್ಲಿ ಒಂದಾಗುತ್ತಾರೆ.

ಈ ಸೇವಾವೃಕ್ಷಕ್ಕಾಗಿ ಬೀಜ ನೆಟ್ಟಿದ್ದು ಹೀಗೆ. ವಿಶೇಷ ಮಕ್ಕಳನ್ನು ಸಲಹಲು, ಅವರ ಶೈಕ್ಷಣಿಕ ಚಟುವಟಿಕೆಗೆ ಪ್ರೋತ್ಸಾಹಿಸಲು ಇಂಥ ಪಾಲಕರಿಗೆ ಸೂಕ್ತ ತರಬೇತಿಯಾಗಲಿ, ಅರಿವಾಗಲಿ ಇರುವುದಿಲ್ಲ. ಕಾರಣ, ಬಹಳಷ್ಟು ಪಾಲಕರು ಧೃತಿಗೆಡುತ್ತಾರೆ. ಹಾಗಾಗಿ, ವಿಶೇಷ ಮಕ್ಕಳ ಸರ್ವಾಂಗೀಣ ಪ್ರಗತಿ ಹಾಗೂ ಪುನರ್ವಸತಿಗಾಗಿ ಸಮರ್ಪಿತ ಸಂಸ್ಥೆಯೊಂದು ಬೇಕು ಎಂಬ ಪಾಲಕರ ಒತ್ತಾಸೆ ಮೇರೆಗೆ 2003ರಲ್ಲಿ ನೋಂದಾಯಿತ ಸಂಸ್ಥೆಯಾಗಿ ಧರಿತ್ರಿ ರೂಪುಗೊಂಡಿತು. ಹನ್ನೆರಡು ವರ್ಷದ ಹಿಂದೆ ತಂತ್ರಜ್ಞಾನ ಹಾಗೂ ಚಿಕಿತ್ಸಾ ವಿಧಾನ ಇಷ್ಟೊಂದು ವಿಕಸನವಾಗಿರಲಿಲ್ಲ. ಸಂಸ್ಥೆ ಆರಂಭಿಸಲು ಸೂಕ್ತ ಸ್ಥಳಾವಕಾಶದ ಅವಶ್ಯಕತೆಯೂ ಇತ್ತು. ಆಗ ಒಂದಿಷ್ಟು ಸಮಾಜಮುಖಿ ವ್ಯಕ್ತಿಗಳೆಲ್ಲ ಸೇರಿ ಈ ಕನಸು ನನಸಾಗಿಸಲು ಮುಂದಾದರು. ನರಸೀಪುರ ಗ್ರಾಮದ ಆರು ಎಕರೆ ವಿಸ್ತೀರ್ಣವಾದ ಜಾಗದಲ್ಲಿ, ಅಪ್ಪಟ ಗ್ರಾಮೀಣ ಸೊಗಡಿನ ವಾತಾವರಣದಲ್ಲಿ ಸಂಸ್ಥೆ ಆರಂಭವಾಯಿತು. ಆದರೂ, ನಗರದಿಂದ ದೂರವಾಗಿದ್ದರಿಂದ ಆರಂಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮಕ್ಕಳ ಹಿತ ಕಾಯಬೇಕು ಎಂಬ ಧ್ಯೇಯದ ಮುಂದೆ ಆ ಕಷ್ಟಗಳೆಲ್ಲ ಶರಣಾದವು. ಮಕ್ಕಳ ಸಂಖ್ಯೆ, ಚಟುವಟಿಕೆಗಳು ಕ್ರಮೇಣ ಹೆಚ್ಚುತ್ತ ಹೋಗಿ ಕಾರ್ಯವ್ಯಾಪ್ತಿ ಕೂಡ ವಿಸ್ತರಿಸಿತು. ಸದ್ಯ ಸಂಸ್ಥೆಯು ಇಂಥ ಮಕ್ಕಳಿಗಾಗಿ ನರಸೀಪುರದ ವಸತಿಶಾಲೆ ಹೊರತುಪಡಿಸಿ ಬೆಂಗಳೂರು ಸುತ್ತಮುತ್ತ ಮೂರು ಶಾಲೆಗಳನ್ನು ನಡೆಸುತ್ತಿದ್ದು, 200 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ 2ನೇ ಹಂತ, ಮಾಗಡಿ ರಸ್ತೆಯ ಕಾಪೋರೇಷನ್ ಶಾಲಾ ಆವರಣ, ಶಿವಾಜಿ ನಗರದ ಸೇಂಟ್ ಜಾನ್ಸ್ ರಸ್ತೆ ಬಳಿ ಈ ಶಾಲೆಗಳು ನಡೆಯುತ್ತಿವೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಯಷ್ಟೇ ಅಲ್ಲದೆ ಸರ್ವಾಂಗೀಣ ಪ್ರಗತಿಗೂ ಆದ್ಯತೆ ನೀಡಲಾಗುತ್ತಿದೆ. ನರಸೀಪುರ ವಸತಿಶಾಲೆಯಲ್ಲಂತೂ ವಿವಿಧ ಚಿಕಿತ್ಸಾ ವಿಧಾನಗಳ ಮೂಲಕ ಮಕ್ಕಳ ನ್ಯೂನತೆಯನ್ನು ಹೋಗಲಾಡಿಸುವ ಪ್ರಯತ್ನ ನಡೆಯುತ್ತಿದೆ. ಅಲೋಪಥಿ, ಆಯುರ್ವೆದ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಅವಶ್ಯಕ ಉಪಕರಣಗಳನ್ನೂ ಪೂರೈಸಲಾಗಿದೆ.

ಧರಿತ್ರಿ ಟ್ರಸ್ಟ್ (ಸಂಪರ್ಕಕ್ಕಾಗಿ: 080- 23567518 INFO@DHARITHREE.ORG)

ಸಮಾಜದ ಬೆಂಬಲ, ನೆರವಿನಿಂದಲೇ ನಡೆಯುತ್ತಿದೆ ಎಂಬುದು ವಿಶೇಷ. ಬರೀ ಸೌಲಭ್ಯಗಳಷ್ಟೇ ಅಲ್ಲದೇ ಮಕ್ಕಳ ಆತ್ಮಸ್ಥೈರ್ಯ ವನ್ನು ಹೆಚ್ಚಿಸುವುದು, ಅವರು ಸ್ವಾವಲಂಬಿಯಾಗಿ ಬದುಕಲು ದಾರಿ ನಿರ್ವಿುಸಿಕೊಡುವುದು ಸಂಸ್ಥೆಯ ಪ್ರಮುಖ ಉದ್ದೇಶ. ನರಸೀಪುರದ ಸೇವಾಪ್ರಕಲ್ಪ ನಿರ್ವಿುಸಿರುವ ಪರಿಯೇ ವಿಶಿಷ್ಟ. ಆಟಿಸಂನಿಂದ ಬಳಲುವವರಿಗೆ, ಐಕ್ಯೂ ಕಡಿಮೆ ಇರುವ ಮಕ್ಕಳಿಗೆ, ಬುದ್ಧಿಮಾದ್ಯಂತೆ ತೀವ್ರ ಪ್ರಮಾಣದಲ್ಲಿ ಇರುವವರಿಗೆ ಪ್ರತ್ಯೇಕ ತರಗತಿಗಳನ್ನೇ ನಡೆಸಲಾಗುತ್ತಿದೆ. ಎಷ್ಟೋ ಮಕ್ಕಳಿಗೆ ಅವರ ದಿನಚರಿಯನ್ನು ನಿರ್ವಹಿಸುವುದು ಗೊತ್ತಿಲ್ಲ. ಹಲ್ಲುಜ್ಜುವುದು, ಸ್ನಾನ, ಸ್ವಚ್ಛತೆ-ಇದೆಲ್ಲವನ್ನೂ ಇಲ್ಲಿನ ಸಮರ್ಪಿತ ಸಿಬ್ಬಂದಿ ಹಂತ-ಹಂತವಾಗಿ ಕಲಿಸಿ ಕೊಡುತ್ತಾರೆ. ಸದ್ಯ ಇಲ್ಲಿ ಹುಡುಗರ ವಸತಿಶಾಲೆಯಿದ್ದು, ರಾಜ್ಯದ ಬೇರೆ ಬೇರೆ ಭಾಗಗಳ ಮಕ್ಕಳು ನೆಲೆಸಿದ್ದಾರೆ. ಬಾಲಕಿಯರಿಗಾಗಿಯೇ ಪ್ರತ್ಯೇಕ ಹಾಸ್ಟೆಲ್ ನಿರ್ವಿುಸುವ ಕೆಲಸ ಪ್ರಗತಿಯಲ್ಲಿದೆ. ಸೃಜನಶೀಲ ಚಟುವಟಿಕೆಗಳ ಮೂಲಕ ಮಕ್ಕಳ ವಿಕಾಸಕ್ಕೆ ಪ್ರಯತ್ನಿಸಲಾಗುತ್ತಿದ್ದು, ಅಚ್ಚುಕಟ್ಟಾದ ದಿನಚರಿಯನ್ನೂ ರೂಪಿಸಲಾಗಿದೆ. ಆಟಿಸಂ ಹಂತ ದಾಟಿ ಬಂದವರಿಗೆ, ಬುದ್ಧಿಮಾಂದ್ಯತೆ ಪ್ರಮಾಣ ಕಡಿಮೆಯಾದವರಿಗೆ ಸ್ವಾವಲಂಬಿ ಬದುಕಿಗೆ ಅನುಕೂಲವಾಗುವ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಮೊದಲಿಗೆ ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಿ ಬಳಿಕ ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಗೊಬ್ಬರ ತಯಾರಿಕೆ, ಹೊಲಿಗೆ ತರಬೇತಿ ಕಲ್ಪಿಸಲಾಗುತ್ತಿದೆ. ಇದರ ಫಲಶ್ರುತಿಯಾಗಿ ಎಷ್ಟೋ ಮಕ್ಕಳು ಸ್ವಾವಲಂಬಿ ಬದುಕನ್ನು ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ.

ಟ್ರಸ್ಟ್​ನಲ್ಲಿ ಇರುವ ಪದಾಧಿಕಾರಿಗಳೆಲ್ಲ ಮಕ್ಕಳ ಬಗ್ಗೆ ಅತೀವ ಕಾಳಜಿ ಅಷ್ಟೇ ಮಮತೆಯನ್ನು ಹೊಂದಿರುವುದರಿಂದ ಸಂಸ್ಥೆಯ ಕೆಲಸ ಉತ್ಕರ್ಷವಾಗುತ್ತಿದೆ. ಸತೀಶ್ ಚಂದ್ರ ಗೋಲ್, ಟಿ.ಎಸ್.ಚಂಪಕ್​ನಾಥ್ ಅಧ್ಯಕ್ಷ-ಉಪಾಧ್ಯಕ್ಷರಾಗಿರುವ ಟ್ರಸ್ಟಿಗೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಬೆಟಗೇರಿ ಕಾರ್ಯದರ್ಶಿ. ಗೋರಕ್ಷಣೆ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀಕಾಂತ ಬೆಟಗೇರಿ ಸಂಸ್ಥೆಯಲ್ಲಿ ಹೊಸ ಹೊಸ ಯೋಜನೆ, ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುತ್ತ ಈ ಮಕ್ಕಳೂ ಇತರರಂತೆ ಉತ್ತಮ ಬಾಳು ಕಂಡುಕೊಳ್ಳಬೇಕು ಎಂದು ಹಂಬಲಿಸುತ್ತಿದ್ದಾರೆ. ಅದಕ್ಕಾಗಿ ಅವಶ್ಯವಿರುವ ಸಂಪನ್ಮೂಲ ವ್ಯಕ್ತಿಗಳನ್ನು ಜೋಡಿಸಿದ್ದು, ಇಲ್ಲಿನ ಬೋಧಕ ಸಿಬ್ಬಂದಿ ವಿವಿಧ ಥೆರಪಿಗಳಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ‘‘ವಿಶೇಷ ಮಕ್ಕಳ ವರ್ತಮಾನ ಸಂಭಾಳಿಸಿ, ಭವಿಷ್ಯವನ್ನು ರೂಪಿಸುವುದು ಸವಾಲು. ಹಾಗಾಗಿ, ತುಂಬ ಜನರು ಈ ಕೆಲಸದಿಂದ ಹಿಂದೆ ಸರಿಯುತ್ತಾರೆ. ಹಾಗಾದರೆ, ಈ ಮಕ್ಕಳಿಗೆ ನೆರವಾಗುವುದಾದರೂ ಯಾರು? ಕೆಲ ನ್ಯೂನತೆಗಳನ್ನು ಹೋಗಲಾಡಿಸಿಬಿಟ್ಟರೆ ಈ ಮಕ್ಕಳು ಸಾಮಾನ್ಯರಿಗಿಂತ ಉತ್ತಮ ಸಾಧನೆ ಮಾಡಬಲ್ಲರು. ಆದರೆ, ಆ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಅವರ ಪಾಲಕರಲ್ಲಿ ಜಾಗೃತಗೊಳಿಸಬೇಕಿದೆ. ಧರಿತ್ರಿ ಪ್ರಮುಖವಾಗಿ ಈ ಕೆಲಸ ಮಾಡುತ್ತಿದ್ದು, ಹಲವು ಸವಾಲುಗಳ ನಡುವೆಯೂ ಉತ್ತಮ ಸ್ಪಂದನೆ ದೊರೆತಿದೆ’’ ಎನ್ನುತ್ತಾರೆ ಬೆಟಗೇರಿ.

ವಸತಿಶಾಲೆಯ ಆವರಣದಲ್ಲೇ ಒಂದು ಸುಂದರ ಗೋಶಾಲೆಯನ್ನೂ ನಿರ್ವಿುಸಲಾಗಿದೆ. ಗೋಶಾಲೆಯ ಮಧ್ಯದಲ್ಲೇ ಶ್ರೀಕೃಷ್ಣನ ಪುಟ್ಟ , ಅತ್ಯಾಕರ್ಷಕ ಮಂದಿರ ನಿರ್ವಿುಸಲಾಗಿದೆ. ಸಂಜೆ ಹೊತ್ತಿಗೆ ಗೋವಿನ ಸೇವೆಯಲ್ಲಿ ತೊಡಗುವ ಮಕ್ಕಳು ಶ್ರೀಕೃಷ್ಣನೊಂದಿಗೂ ಸಂವಾದಿಸುತ್ತಾರೆ, ನೋವು-ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ನಾಲ್ಕೂ ಶಾಲೆಗಳ ಮಕ್ಕಳನ್ನು ಒಟ್ಟಿಗೆ ತಂದು ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತದೆ. ಯಾವ ಮಕ್ಕಳಿಗೂ ಕಡಿಮೆ ಇಲ್ಲದಂತೆ ಇವರು ಸಂಗೀತ, ನೃತ್ಯ, ಯೋಗದ ಪ್ರದರ್ಶನ ನೀಡಿ ಸೈ ಎನಿಸಿಕೊಳ್ಳುತ್ತಾರೆ. ಇವರ ಮುಗ್ಧತೆಗೆ, ಕಲಿತು ಮುಂದೆ ಸಾಗುವ ಹುರುಪಿಗೆ ಹಲವು ನಿಸ್ವಾರ್ಥ ಮನಸುಗಳು ಬೆಂಬಲ ನೀಡುತ್ತಿವೆ. ದೆಹಲಿಯ ಪ್ರತಿಷ್ಠಿತ ‘ನ್ಯಾಷನಲ್ ಟ್ರಸ್ಟ್’ನಿಂದ ಉತ್ತಮ ಸಂಸ್ಥೆ ಪ್ರಶಸ್ತಿಯೂ ಲಭಿಸಿದೆ. ನಾಳೆ (ಡಿ.3) ವಿಶ್ವ ಅಂಗವಿಕಲರ ದಿನ. ಈ ಕ್ಷೇತ್ರದಲ್ಲಿ ಅಸಾಧಾರಣ ಕೆಲಸ ಮಾಡಿದ ಸಾಧಕರನ್ನು ಹಾಗೂ ಸಂಸ್ಥೆಗಳನ್ನು ರಾಜ್ಯ ಸರ್ಕಾರ ಗುರುತಿಸಿ ಗೌರವಿಸುತ್ತದೆ. ಈ ಸಾಲಿನ ಇಂಥ ಗೌರವಕ್ಕೆ ಧರಿತ್ರಿ ಟ್ರಸ್ಟ್ ಭಾಜನವಾಗಿದ್ದು, ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ‘ಹಮ್ ನಾ ಸೋಚೆ ಹಮೇ ಕ್ಯಾ ಮಿಲಾ ಹೈ, ಹಮ್ ಸೋಚೆ ಕಿಯಾ ಕ್ಯಾ ಹೈ ಅರ್ಪಣ್’ (ನಮಗೆ ಏನು ಸಿಕ್ಕಿದೆ ಅನ್ನುವುದಕ್ಕಿಂತ ನಾವೇನು ಅರ್ಪಣೆ ಮಾಡಿದ್ದೇವೆ ಎಂದು ಯೋಚಿಸಬೇಕು) ಎಂಬ ತತ್ತ್ವವನ್ನು ನಂಬಿಕೊಂಡು ಸಾಗಿರುವ ಸಂಸ್ಥೆ ನಿಜಕ್ಕೂ ಪ್ರೇರಣೆಯ ಬೆಳಕನ್ನು ಚೆಲ್ಲುತ್ತಿದೆ. ಇಲ್ಲಿನ ಮಕ್ಕಳೂ ನೋವು ಮರೆತು ಖುಷಿ, ನಲಿವನ್ನು ಹಂಚುತ್ತಿದ್ದಾರೆ.

ಇದನ್ನೆಲ್ಲ ನೋಡುತ್ತಿರುವ ಭಗವಾನ್ ಕೃಷ್ಣ ಕೂಡ ಮಕ್ಕಳೊಡನೆ ಮಂದಸ್ಮಿತನಾಗುತ್ತಾನೆ, ಅವರ ನಗುವಲ್ಲಿ ತಾನೂ ಒಂದಾಗುತ್ತಾನೆ!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು) http://vijayavani.net/?p=1698670

Share:

Leave your comments